Tuesday, September 8, 2015

ಹೊಂಬಿಸಿಲೇ, ಚುಂಬಿಸು ನನ್ನ ಪುಟ್ಟ ಇನಿಯನ ಹಾಲುಗಲ್ಲ

ಹೊಂಬಿಸಿಲೇ, ಚುಂಬಿಸು ನನ್ನ ಪುಟ್ಟ ಇನಿಯನ ಹಾಲುಗಲ್ಲ
ತಂಗಾಳಿಯೇ, ಓರಣಮಾಡು ಮಗುವಿನ ರೇಶಿಮೆಗೂದಲ

ಕಲ್ಪವೃಕ್ಷವೇ, ತೊಳೆ ಕಂದನ ಅಂಗಾಲ ಎಳೆನೀರಿಂದ
ಬಿದಿರ ಮೆಳೆಯೇ ಬೆದರಿಸದಿರು ನಿನ್ನ ದನಿಯಿಂದ

ಮಂಡೂಕವೇ, ಶುದ್ಧೀಕರಿಸು ಕೂಪದ ಜಲವನ್ನ
ಮತ್ಸ್ಯವೇ, ಕೃಷಿ ಹೊಂಡದಲಿ ನರ್ತಿಸಿ ರಂಜಿಸು ಮಗನನ್ನ

ಅಡಿಕೆ ಮರವೇ ಸುರಿ ಅಂದದ ಮೊಗದ ಮೇಲೆ ಹಿಂಗಾರದ ಹಾಲನ್ನ
ಹೆಜ್ಜೇನೆ, ಮನೆಯೆದುರಿನ ವೃಕ್ಷದಿ ಕಟ್ಟು ಕಂದನಿಗೋಸುಗ ಜೇನನ್ನ

ಮಲ್ಲಿಗೆ ಕಂಪೇ, ಅರಳಿಸು ತನುಜನ ನಾಸಿಕವ
ಕಾಕಿಯೇ, ಹಿರಿಯರ ರೂಪದಿ ಬಂದು ಹರಸು ಶಿಶುವ


Wednesday, June 10, 2015

ಬದುಕಿ ಮತ್ತು ಬದುಕಲು ಬಿಡಿ

ಭಾರತ ಮಾತೆಯ ಹೆಮ್ಮೆಯ ವೈಭವೋಪೇತ ವಜ್ರ ಮುಕುಟ
ಜಮ್ಮು ಕಾಶ್ಮೀರ, ರುದ್ರ ರಮಣೀಯ ಹಿಮಾಲಯ ಪರ್ವತ

ಇದುವೇ ಧರಿತ್ರಿಯ ಮೇಲಿನ ಸ್ವರ್ಗವು, ನೀಲಕಂಠನ ತಪೋವನವು
ಅಮೃತ ಸ್ಫುರಿಸುವ ಗಂಗಾದೇವಿಯ ಉಗಮಸ್ಥಾನವು

ಅಗಾಧ ಕಾಡು, ಅಪರಿಮಿತ ಋಷಿ-ಮುನಿಗಳ ನಾಡು
ಅಪರೂಪದ ಖಗ-ಮೃಗ, ಸಂಜೀವಿನಿಯ ನೆಲೆವೀಡು

ಈ ಪವಿತ್ರ ನೆಲದಲ್ಲಿ ಜನಿಸಿದ ನಮ್ಮ ಅಣ್ಣ-ತಂಗಿಯರು 
ಪುಣ್ಯವಂತರೋ ಇಲ್ಲಾ ಶಾಪಗ್ರಸ್ತರೋ?

ಪ್ರಕೃತಿಮಾತೆ ಯಥೇಚ್ಛವಾಗಿ ನೀಡಿಹಳು ವರ 
ಮೂಲಭೂತವಾದಿಗಳು ಎಸಗುವರು ಅತ್ಯಾಚಾರ 

ನಡೆಯುತಿದೆ ಪ್ರತಿ ಕ್ಷಣವೂ, ಅಸಂಖ್ಯ ಮುಗ್ಧರ ಮಾರಣಹೋಮ
ತಾಯಿಯ ಹಾಲು ಬಿಳುಪಿನ ಸೀರೆಯಾಗಿದೆ ರಕ್ತವರ್ಣ

ಹಿಮಾಲಯ ಭಾರತಿಯ ಶಿರವು, ಕಾಶ್ಮೀರವು ಸುಂದರ ವದನ
ನರಹಂತಕರೇ ಮಾಡದಿರಿ ಆಕೆಯ ಶಿರಚ್ಛೇದನ !!!

ಸೇಡು ಸೇಡನ್ನು ಹುಟ್ಟಿಸುತ್ತದೆ ಎಂಬ ಹೈದರ್ ಸಿನಿಮಾದ ನುಡಿ
ಅರಿತು ಕೊಲೆಗಾರರೇ ಬದುಕಿ ಮತ್ತು ಬದುಕಲು ಬಿಡಿ





Friday, April 24, 2015

ನೀ ನನ್ನ ಬಸಿರು.. ನೀ ನನ್ನ ಉಸಿರು

ನೀ ನನ್ನ ಬಸಿರು.. ನೀ ನನ್ನ ಉಸಿರು
ನೀ ನನ್ನ ಕನಸು.. ನೀ ನನ್ನ ನನಸು
ನೀ ನನ್ನ ನುಡಿ.. ನೀ ನನ್ನ ನಡೆ
ನೀ ನನ್ನ ಜೀವ.. ನೀ ನನ್ನ ಭಾವ

ನಾ ಕುಡಿಯುವ ನೀರ ತುಂಬಾ
ಮುದ್ದು ಕಂದ ನಿನ್ನದೇ ಬಿಂಬ
ಉಣ್ಣುವ ಕುಸುಬಲಕ್ಕಿ ಗಂಜಿ  ಅನ್ನ
ನಿನ್ನ ನೆನಪಿಂದಾಗಿದೆ ಮೃಷ್ಟಾನ್ನ

ಅಜ್ಜಿ ಕಥೆಯ ಒಂದಾನೊಂದು ಕಾಲದ ಜಾದೂಗಾರ
ಇಡುತ್ತಿದ್ದ ತನ್ನ ಜೀವವ ಪಂಜರದ ಗಿಳಿಯ ಹತ್ತಿರ
ಅದೇ ರೀತಿ ಎನ್ನ ಎದೆಗೂಡಾಗಿದೆ ಹೃದಯವಿಲ್ಲದೆ ಖಾಲಿ
ಇರುವುದದು ನನ್ನ ಪುಟ್ಟ ಗೆಣೆಕಾರನ ಬಳಿಯಲ್ಲಿ

ನನ್ನ ಭೂತ, ವರ್ತಮಾನ, ಭವಿಷ್ಯ
ಇವನೇ ಎಂಬುದು ನೂರಕ್ಕೆ ನೂರು ಸತ್ಯ
ನನ್ನ ರಕ್ತನಾಡಿಯಲಿ ಸ್ಥಗಿತವಾದ ನೆತ್ತರ ಸಂಚಾರ
ಆರಂಭವಾಗುವುದು ಕೇಳಿದಾಗ 'ವರ್ಯ' ಎಂಬ ಹೆಸರ

ಎಲ್ಲಕ್ಕೂ ಮಿಗಿಲಾಗಿ ನನ್ನ ನಾಮಧೇಯದಲ್ಲೂ
ಚಿನ್ನಾ.. ನೀನೇ ಸೇರಿಕೊಂಡೆಯಲ್ಲೋ


Thursday, April 23, 2015

ಬಾಲ್ಯದ ನೆನಪುಗಳು ಮರುಕಳಿಸಿದ್ದು..

ಬೆಳಗಾಗೆದ್ದು ಅಡುಗೆ ಮಾಡಿ,  ಡಬ್ಬಿಗಳಿಗೆ ತುಂಬಿ, ಉಳಿದಿದ್ದನ್ನು ತಿಂದು, ಮಿಂದು..
ಗೀಸರ್, ಮೋಡೆಮ್, ಫ್ಯಾನು, ಲೈಟು ಆರಿಸಿದ್ದೇನಾ ಎಂದು ಎರಡೆರಡು ಬಾರಿ ನೋಡಿ..
ಹೆಬ್ಬಾಗಿಲಿಗೆ ಬೀಗ ಜಡಿದು ಓಡೋಡಿ ಆಫೀಸಿಗೆ ಹೊರಟೆ.

ನಾ ನಡೆವ ಹಾದಿಯೋ.. ಏನೆಂದು ಬಣ್ಣಿಸಲಿ.. ಬಿರುಬಿಸಿಲು.. ಮರ ಗಿಡಗಳಿಲ್ಲದ ದಾರಿ.
ಪಕ್ಕದ ವಾಹನಕ್ಕಿಂತ ನಾನು ಮುಂದೆ ಹೋಗಬೇಕೆಂಬ ತವಕದಲ್ಲಿ ಸಂಚಾರ ಸ್ಥಗಿತಗೊಳಿಸುವ ಅನಾಗರೀಕರು
ಎಲ್ಲಿ ಹೋಯಿತು ನಮ್ಮ ಉದ್ಯಾನ ನಗರ ? ಚೆಲುವ ಕನ್ನಡ ನಾಡಿನ ಹೃದಯ ಸಾಮ್ರಾಜ್ಞಿ 'ಬೆಂಗಳೂರು' :(

ಮೈಮನಗಳನ್ನು ಅಷ್ಟೇ ಅಲ್ಲ ಮೂಗನ್ನೂ, ಬಾಯನ್ನೂ ಕರವಸ್ತ್ರದಿಂದ ಮುಚ್ಚಿ ಹಿಡಿದು
'ಕನ್ನಡ' ಕೇಳುವ ಭಾಗ್ಯವೇ ಇರದ ಬಾಗ್ಮನೆ ಟೆಕ್ನಾಲಜಿ ಪಾರ್ಕನ್ನು ಇನ್ನೇನು ತಲುಪಿದೆ ಎನ್ನುವಷ್ಟರಲ್ಲಿ..
ಒಂದು ಚಿರಪರಿಚಿತ ಅನ್ನಿಸಿದ ಮುಖ!!! ಕನ್ನಡತಿಯ ಮುಖ :) 

ನಡಿಗೆಯನ್ನು ಚುರುಕುಗೊಳಿಸಿ ಆಕೆಗಿಂತ ಎರಡು ಹೆಜ್ಜೆ ಮುನ್ನಡೆದು ತಿರುಗಿ ನೋಡಿದಾಗ..
ಅವಳ ಮನದಲ್ಲೂ ಅದೇ ಭಾವನೆ.. ಆ ಭಾವನೆ ಆಕೆಯ ತುಟಿಯಂಚಿನ ಕಿರುನಗೆಯಾಗಿ ಬದಲಾಯಿತು :)
ಪರಸ್ಪರ ನಗುವಿನ ವಿನಿಮಯ, ಕೊಂಚ ಮಾತು ಕಥೆಯ ನಂತರ ಬೀಳ್ಕೊಡುಗೆ ...

ನನ್ನ ತವರು ಚಿಕ್ಕಮಗಳೂರಿನ ಹುಡುಗಿ.. ವಾಣಿ.... ಅವಳ ಕಂಡಾಕ್ಷಣ ಅಕ್ಷಿಪಟಲದಲ್ಲಿ ಮೂಡಿದ್ದು..
ನೀಲಿ-ಬಿಳಿ ಚೌಕದ ಸಮವಸ್ತ್ರಧಾರಿಯಾಗಿದ್ದ ಪುಟ್ಟ ಬಾಲಕಿ ವಾಣಿಯ ಚಿತ್ರ..
ಮೊದಲ ಮಳೆ ಧಾರಿಣಿಯ ಚುಂಬಿಸಿದಾಗಿನ ಮಣ್ಣಿನ ಕಂಪಿನಂತ ಬಾಲ್ಯ..
ಬಾಲ್ಯದ ನೆನಪುಗಳನ್ನು ಮರುಕಳಿಸುವಂತೆ ಮಾಡಿದ ವಾಣಿಗೆ ಧನ್ಯವಾದಗಳು.

Wednesday, April 22, 2015

ಸಾಯಬೇಕು.. ಸ್ವರ್ಗ ಕಾಣಬೇಕು ಅನ್ನುವರು ಜನ



ಸಾಯಬೇಕು.. ಸ್ವರ್ಗ ಕಾಣಬೇಕು ಅನ್ನುವರು ಜನ
ಆದರೆ ಅಮ್ಮ ಕಂಡಳು ತಾಯಿಯಾಗಿ ಸ್ವರ್ಗವನ್ನ 

ನನ್ನ ತಾಯಿ ಮೊಮ್ಮಗನಿಗೂ ಜನ್ಮದಾತೆಯಾದ ಬಗೆ 
ಸಹೃದಯರಿಗೆ ಸ್ನೇಹಿತರಿಗೆ ವರ್ಣಿಸಲಿ ಹೇಗೆ 

ಶಿಶು ಜನಿಸಿದಾ ಮೊದಲ ಮೂರು ತಿಂಗಳು
ತಾಯಿಗೆ ಸಂಪೂರ್ಣ ನಿದ್ರಾರಹಿತ ಇರುಳುಗಳು

ನಸುಕಲ್ಲಿ ಕೂಡ ಹಾಲುಗಲ್ಲದ ಕಂದ
ನನ್ನಮ್ಮನೇ ಬೇಕೆಂದು ಕಾಡಿದ 

ಬಾಣಂತಿಗೆ ಬಿಸಿ ಮೆಣಸಿನ ಸಾರು, ಸಬ್ಬಸಿಗೆ ಸೊಪ್ಪು 
ಒಂದು ಮುಚ್ಚಳ ಬ್ರಾಂದಿ, ಕುರಿ ಕಾಲು ಸೂಪು 

ಕಂದನ ಸೇವೆಗೆ ಆಕೆ ನಿಂತಳಾ 
ಕಂಗಳ ಕಪ್ಪು ವರ್ತುಲ, ರವಿಕೆಯಾದವು ಸಡಿಲ

ಉಪಕಾರ ಬಯಸದೆ ನೀಡುವ ನಿಸ್ವಾರ್ಥ ಪ್ರೀತಿ
ಮಾಡಿದ ತಪ್ಪನ್ನೆಲ್ಲ ಕ್ಷಮಿಸುವ ರೀತಿ

ತಾಯಿ ಮಗಳ ಪಾಲಿಗೆ ಶ್ರೀಗಂಧದಂತೆ
ತೇದಳು ಜೀವನವ ಮಾಡಿ ಕೊರಡಿನಂತೆ

ಸಾಯಬೇಕು.. ಸ್ವರ್ಗ ಕಾಣಬೇಕು ಅನ್ನುವರು ಜನ
ಆದರೆ ಅಮ್ಮ ಕಂಡಳು ತಾಯಿಯಾಗಿ ಸ್ವರ್ಗವನ್ನ

ಮನಸಿನ ಲಹರಿಯನ್ನ ಪುಟ್ಟ ಕಲ್ಲೊಂದು ಕೆಣಕಿದೆ



ಮನಸಿನ ಲಹರಿಯನ್ನ ಪುಟ್ಟ ಕಲ್ಲೊಂದು ಕೆಣಕಿದೆ  
ಇಂದು ನಿನಗೇನಾಯಿತೆಂದು ಎನ್ನ ಕೇಳುತಿದೆ

ಹುಟ್ಟುಹಬ್ಬ ಎಂದು ಮಾರ್ಚಿ ತಿಂಗಳ ಶುರುವಿನಿoದ 
ಇರುತ್ತಿದ್ದ ಉತ್ಸಾಹ ಎಲ್ಲಿ ಹೋಯಿತೆಂದು ?  

ಐವತ್ತು ಪೈಸೆಯ ಅರವತ್ತು ಚಾಕಲೇಟುಗಳು  
ಅಪ್ಪನೊಡನೆ ಕೊಂಡು ತಂದ ಆ ದಿನಗಳು  

ಹೊಸ ಬಟ್ಟೆ ಮ್ಯಾಚಿಂಗ್ ಬಳೆಗಳು  
ಅಮ್ಮ ಮಾಡಿದ ಸಿಹಿ ತಿನಿಸುಗಳು 

ರವಿ ಮೂಡಿದರೆ ನನ್ನ ದಿನ ಎಂಬ ಹುರುಪಿಂದ 
ನಿದ್ದೆ ಇಲ್ಲದೆ ಕಳೆದ ಇರುಳುಗಳು 

ಯಾವ ಸ್ನೇಹಿತರು ಮೊದಲು ಹಾರೈಸುವರೆಂದು 
ಮಾಡಿದ ಕುರುಡು ಊಹೆಗಳು  

ವರುಷಗಳು ಉರುಳಿದಂತೆ ಮಾಸುತಿದೆ ಹುರುಪು
ಕಾಡುತಿದೆ ಬಾಲ್ಯದ ಸವಿ ಸವಿ ನೆನಪು

ಮನಸಿನ ಲಹರಿಯನ್ನ ಪುಟ್ಟ ಕಲ್ಲೊಂದು ಕೆಣಕಿದೆ  
ಇಂದು ನಿನಗೇನಾಯಿತೆಂದು ಎನ್ನ ಕೇಳುತಿದೆ